ಎಲ್ಲಾ ಓಕೆ, ಈಗ ಬೆಳಗಾವಿಯಲ್ಲಿ ಮರಾಠಿ ಸಾಹಿತ್ಯ ಸಮ್ಮೇಳನ ಯಾಕೆ?

ನೆರೆರಾಜ್ಯ ಮಹಾರಾಷ್ಟ್ರದ "ಮಹಾರಾಷ್ಟ್ರ ಏಕೀಕರಣ ಸಮಿತಿ" ಅನ್ನೋ ರಾಜಕೀಯ ಪಕ್ಷಕ್ಕೆ ಈಗಾಗಲೇ ಮಹಾರಾಷ್ಟ್ರಕ್ಕೆ ಇರೋ ಮಹತ್ತು ಸಾಕಾಗ್ತಿಲ್ಲ ಅನ್ಸತ್ತೆ - ಬೆಳಗಾವಿಯಲ್ಲಿ ಮರಾಠಿ ಸಾಹಿತ್ಯ ಸಮ್ಮೇಳನ ಮಾಡ್ಬೇಕು ಅಂತ ಕಾಲ್ ಕೆರಕೊಂಡು ಜಗಳಕ್ಕೆ ಬರ್ತಿದೆ (ಇವತ್ತಿನ ವಿ.ಕ.)! ಸಾಂಗ್ಲಿಯಲ್ಲಿ ನಡೀಬೇಕಾಗಿದ್ದ ಸಮ್ಮೇಳನಾನ ಮರ್ಯಾದೆಯಾಗಿ ಅಲ್ಲೇ ಬಿಟ್ಟಿದ್ರೆ ಆಗ್ತಿರಲಿಲ್ವಾ? ಬೆಳಗಾವಿ ಕರ್ನಾಟಕಕ್ಕೇ ಸೇರಬೇಕಾಗಿರೋದು ಅಂತ ಮಹಾರಾಷ್ಟ್ರಕ್ಕೆ ಗೊತ್ತೇ ಇದೆ. ಆದರೂ ತನ್ನ ರಾಜ್ಯದೊಳಗೆ ಮರಾಠಿ ನುಡಿಯ ಏಳ್ಗೆಗಾಗಿ ದುಡಿದು ಅದನ್ನ ಜಾಗತಿಕ ಮಟ್ಟಕ್ಕೆ ಏರಿಸೋ ಬದ್ಲು, ಮರಾಠಿಗರನ್ನ ಜಗತ್ತಿನಲ್ಲಿ ಜನ ಮರ್ಯಾದೆ ಕೊಟ್ಟು ನೋಡೋಹಂಗೆ ಮಾಡೋ ಬದ್ಲು, ಈಗಿರೋ ಮಹಾರಾಷ್ಟ್ರದಲ್ಲಿ ಮರಾಠಿ ಅನುಷ್ಠಾನ ಸರಿಯಾಗಿ ಮಾಡೋ ಬದಲು ಪಕ್ಕದ ಮನೇಲಿ ಕಿರೀಕ್ ಮಾಡಕ್ಕೆ ಯಾಕೆ ಬರಬೇಕು ಗುರು? ಮಹಾಜನ್ ವರದಿ ಪ್ರಕಾರ ಬೆಳಗಾವಿ ಕರ್ನಾಟಕಕ್ಕೇ ಸೇರಬೇಕಾದ್ದು. ಕಿತ್ತೂರು ರಾಣಿ ಚೆನ್ನಮ್ಮ(ಚಿತ್ರ ನೋಡಿ), ಸಂಗೊಳ್ಳಿ ರಾಯಣ್ಣರ ಬೆಳಗಾವಿಗೆ ಇವತ್ತಿನ ದಿನ ಮರಾಠಿಗರಿಂದ ಆಗ್ತಿರೋ ತೊಂದರೆಗೆ ಕಾರಣ ಕರ್ನಾಟಕದ ಜನರು ಕ್ಷಾತ್ರಗುಣವನ್ನೇ ಕೆಟ್ಟದು ಅಂದ್ಕೊಂಡಿರೋದು. ಇದರಲ್ಲಿ ಸಂದೇಹವೇ ಇಲ್ಲ. ಬಹಳ ವರ್ಷಗಳಿಂದ ಕ್ಷತ್ರಿಯರಿಲ್ಲದೆ ಕರುನಾಡು ಕರುಗಳ ನಾಡಾಗಿತ್ತು, ಆದರೆ ಇವತ್ತಿನ ದಿನ ಕನ್ನಡದ ಕ್ಷತ್ರಿಯ ಎದ್ದೇಳುತ್ತಿದ್ದಾನೆ. ಕನ್ನಡಿಗನಲ್ಲಿ ಕ್ಷಾತ್ರಗುಣ ಮತ್ತೊಮ್ಮೆ ಮೊಳಕೆ ಒಡೀತಿದೆ ಗುರು!

Belgaum ಅನ್ನೋದನ್ನ Belagavi ಅಂತ ಬರೀಬೇಕು ಅನ್ನೋದಕ್ಕೆ ಕೇಂದ್ರ ಸೈ ಅಂದಿರೋದು, ಕನ್ನಡ ಸಾಹಿತ್ಯ ಸಮ್ಮೇಳನ ನಡೆಸುತ್ತಿರೋದು, ವಿಧಾನಸಭಾ ಅಧಿವೇಶನ ನಡೆಸಿದ್ದು, ಕರವೇ ನೋರು ವಿಜಯ ಮೋರೆಗೆ ಫೇರ್-ಅಂಡ್-ಲವ್ಲಿ ಹಾಕಿ ಸನ್ಮಾನ ಮಾಡಿದ್ದು - ಎಲ್ಲಾ ಮಿಕ್ಸ್ ಆಗಿ ಲೈಫಲ್ಲಿ ರಿಪೇರಿ ಮಾಡಕ್ಕಾಗದೇ ಇರೋ ಅಷ್ಟು ಗಾಯ ಆಗಿದ್ರೂ ಕುಟುಕು-ಕುಟುಕು ಜೀವ ಇನ್ನೂ ಇದ್ದಂತಿದೆ!

ಅದಿರಲಿ, ಈ "ಮಹಾರಾಷ್ಟ್ರ ಏಕೀಕರಣ ಸಮಿತಿ" ಅನ್ನೋ ಹೆಸರಿಟ್ಟುಕೊಂಡಿರೋ ರಾಜಕೀಯ ಪಕ್ಷಕ್ಕೆ ಚುನಾವಣಾ ಆಯೋಗ ಕರ್ನಾಟಕದಲ್ಲಿ ಚುನಾವಣೆಗೆ ನಿಲ್ಲೋ ಹಕ್ಕಾದರೂ ಯಾಕೆ ಕೊಟ್ಟಿದೆ? ಇನ್ನೂ ಯಾವ ಮಣ್ಣು-ಏಕೀಕರಣ ಮಾಡಬೇಕಂತೆ ಇವರು? ಆಗಿಹೋಯಿತು ಆ ಕಾಲ ಮಹಾಜನ್ ತಮ್ಮ ವರದಿ ಬರೆದ ಮೇಲೆ. ಬೆಳಗಾವೀನ ಕನ್ನಡಿಗರು ಎಂದೆಂದಿಗೂ ಬಿಟ್ಕೊಡಕ್ಕಾಗಲ್ಲ ಗುರು! ಆಗಲೇ ಸೊಲ್ಲಾಪುರ ಮುಂತಾದ ಎಷ್ಟೋ ಊರುಗಳನ್ನ ಮಹಾರಾಷ್ಟ್ರಕ್ಕೆ ನೀಗಾಗಿದೆ!

3 ಅನಿಸಿಕೆಗಳು:

ಪವ್ವಿ ಅಂತಾರೆ...

ಮನೋಹರ ಕಿಣೇಕರ್ ಮತ್ತು ಇತರ ಶಾಸಕರ ಕ್ಷೇತ್ರಗಳಿಗೆ ಒಮ್ಮೆ ಬೇಟಿ ಕೋಡಿ , ಆಗ ನಮ್ಮ ಜನರಿಗೆ ತಿಳಿಯುತ್ತದೆ ಇವರು ಮಾಡಿರುವ ಅಭಿವೃದ್ದಿ ಕಾರ್ಯಗಳು ಯಾವ ಮಟ್ಟಕ್ಕೆ ಇವೆ ಎಂದು.
ಎನ್ ಸ್ವಾಮಿ ನಿಮ್ಮ ಕ್ಷೇತ್ರಗಳು ಇಷ್ಟು ಎಕ್ಕುಟ್ಟು ಹೋಗಿವೆ ಎಂದರೆ ಅದಕ್ಕೆ ಕರ್ನಾಟಕ ಸರಕಾರ ಹೋಣೆ ಅಂತಾನೆ ಈ ಭೂಪತಿ.

ಬೆಳಗಾವಿ ಉದ್ಧಾರ ಆಗಬಾರದು ಎಂಬುದೇ ಇವರ ಮಹಾಆಶಯ. ಮಾತಿಗೆ ಮುಂಚೆ ಆ ವಿಲಾಸಿ-ರಾವ್ ದೇಸಮುಖನಿಗೆ ಕಂಪ್ಲೆಟ್ ಕೊಟ್ಟು ಚಾಡಿ ಹೇಳುತ್ತಾರೆ. ಆ ವಯ್ಯ ಮಹರಾಷ್ಟ್ರದ ಪವರ್-ಪವಾರ್ ಸಮಸ್ಯೆಗಳನ್ನು ಬಗೆ ಹರಿಸದೆ ಇವರ್ನ್ನು ಚಕ್ಕಮಕ್ಕಳ ಕೂರಿಸಿಕೊಂಡು ಆಯಿತು ಅದು ಹೇಗೆ ಮಾಡ್ತರೋ ನೋಡ್ತಿವಿ ಅಂತ ಹೇಳಿ ಸಾಗ ಹಾಕುತ್ತಾನೆ.

ಇವರಿಗೆ ಸುಮ್ಮನೆ ಸ್ಕೊಪ್ ತೋಗೊಬೇಕು ಮತ್ತು ನ್ಯೂಸ್ ನಲ್ಲಿ ಬರಬೇಕು ಎಂದು ಆಗಾಗ ಇಂತಾ ಸ್ಟಂಟ್ ಮಾಡುತ್ತ ಇರುತ್ತಾರೆ. ಅಷ್ಟಕ್ಕೂ ಇವರು ಬೆಳಗಾವಿಯನ್ನು ಸೇರಿಸಬೇಕೆಂದು ಹೇಳುತ್ತ ಇರುವುದು ವಿದರ್ಬಗೆ, ಇದು ಯಾವ ರೀತಿಯಲ್ಲಿ ಎಕ್ಕುಟ್ಟು ಹೋಗಿದೆ ಅಂದರೆ, ಅಲ್ಲಿ ರೈತ ನೇಣು ಹಾಕಿಕೊಳ್ಳದ ದೊಡ್ಡ ಮರಗಳಿಲ್ಲ. ಇನ್ನು ವಸಿ ಆ ಕಡೆ ಹೊದ್ರೆ ಶಿಲಾಯುಗಕ್ಕೆ ಬಂದ ಹಾಗೆ ಅನಿಸುತ್ತದೆ. ಅಲ್ಲಿ ಕರೆಂಟ್ ನೋಡಿ ದಶಕಗಳೇ ಆಗಿದೆ. ಆದ್ರೂ ನೋಡಿ ತಮ್ಮ ತಟ್ಟೆಯಲ್ಲಿ ಹೆಗ್ಗಣ ಬಿದ್ದಿದ್ದರು, ನಮ್ಮ ತಟ್ಟೆಯಲ್ಲಿ ಒಂದು ಇರುವೆ ಬಿದ್ದಿದೆ, ಊಟ ಕುಲಗೆಟ್ಟಿದೆ ಅಂತ ಪಾಟೀಲು ಜನ ಪೀಟಿಲು ಬಾರಿಸುತ್ತ ಇರ್ತಾನೆ.

Girish ಅಂತಾರೆ...

ಇವೆಲ್ಲಾ ಸರಿ,ಇವ್ರುಗಳ್ ಜೊತೆಗೆ ನಮ್ ಸರ್ಕಾರಕ್ಕೂ ಸ್ವಲ್ಪ ಹೊಡೀಬೇಕ್ ಗುರು!! ಮುಂಚೆ ತೆಪ್ಗೆ ಇದ್ದಿದ್ದಕ್ಕೆ ಈಗ ಅಷ್ಟೋಂದ್ ಧಿಮಾಕ್ ಆಗಿರೊದು. ಇದೊಂದೆ ಅಲ್ಲ ಗುರು, ಕರ್ನಾಟಕದ ಬಗ್ಗೆ ತುಂಬಾ ಸಹಜವಾಗಿ, ಸುಲುಬವಾಗಿ, ಅಸಡ್ಡೆಯಿಂದ ಮಾತಾಡೋ ಜನರನ್ನ ನೊಡಿದ್ದೆನೆ. ಕಾವೇರೀ ವಿಶಯ, ಬೆಳಗಾವಿ ಬಗ್ಗೆ, ಕ್ರಿಷ್ಣಾ ಬಗ್ಗೆ, ಜನರು ನಮ್ಮದೇ ತಪ್ಪೆನೋ ಅನ್ನೊ ಹಾಗೆ ಮಾತಾಡ್ತಾರೆ! ಅದಕ್ಕೆ ನಾನು ಯಾವಾಗ್ಲೂ ಹೇಳ್ತೆನೆ, ಭಾರತಕ್ಕೆ ಕಾಷ್ಮೀರ ಹೇಗೊ ನಮ್ಗೆ ಇದು ಅಂತ. ನಾವು ಎಲ್ಲರಿಗೂ ಇವುಗಳ ಬಗ್ಗೆ ನಾವು ಎಷ್ಟು stuburn ಅಂತ ಸ್ವಲ್ಪ ಮನವರಿಕೆ ಮಾಡ್ಕೊಡಬೇಕೆನೊ!!! ಸ್ವಲ್ಪ ಗಾಂದಿಗಿರಿ ಉಪಯೊಗಿಸಿ ನೋಡ್ಮೇಕು :)

Kannada ಅಂತಾರೆ...

ನಮ್ಮ ರಾಜಕಾರಣಿಗಳಿಗೆ ಜೋಡು ತಗೊಂಡು ಹೊಡೆದರೂ ತಪ್ಪಿಲ್ಲ.
ಬೆಳಗಾವಿಯಲ್ಲಿ ಮರಾಠಿಗರ ಅಟ್ಟಹಾಸಕ್ಕೆ ಕೊನೆ ಎಂದು? ಬೆಳಗಾವಿ ನಗರ, ಮತ್ತಿತರ ೩-೪ ಊರುಗಳಲ್ಲಿ ಬಿಟ್ಟು ಉಳಿದೆಲ್ಲೂ ಮರಾಠಿಗರ ಪಾಬಲ್ಯವಿಲ್ಲ. ಆದರೆ ಪಕ್ಕದ ಮಹಾರಾಷ್ಟ್ರ ತನ್ನ ಕೆಟ್ಟ ಚಾಳಿಯನ್ನು ಮುಂದುವರಿಸಿ ಎಮ್.ಈ.ಎಸ್ ತರಹದ ಉಂಡ ಮನೆಗೆ ಕೇಡು ಬಯಸುವ ದೇಶದ್ರೋಹಿಗಳಿಗೆ ಕುಮ್ಮಕ್ಕು ಕೊಡುತ್ತಿದೆ. ಇದನ್ನು ಪ್ರಶ್ನಿಸುವ ಧೈರ್ಯವಾಗಲೀ, ಅವಶ್ಯಕಥೆಯಾಗಲೀ ನಮ್ಮ ರಾಜಕಾರಣಿಗಳಲ್ಲಿ ಕಂಡುಬರಿತ್ತುಲ್ಲ.
ಬೆಳಗಾವಿಯಲ್ಲಿ ಕನ್ನಡಕ್ಕೆ ಅನ್ಯಾಯವಾದಾಗಲೆಲ್ಲಾ ದನಿ ಎತ್ತುತ್ತಿರುವುದು ಕರ್ನಾಟಕ ರಕ್ಷಣಾ ವೇದಿಕೆ ಮಾತ್ರ. ಮರಾಠಿ ಸಮ್ಮೇಳನ ಬೆಳಗಾವಿಯಲ್ಲಿ ಮಾಡುವುದು ತಪ್ಪಲ್ಲ.ಕನ್ನಡದ ಸಮ್ಮೇಳನಗಳು ಕರುನಾಡಿನಾಚೆ ಬಹಳಷ್ಟು ನಡೆದಿದೆ.ಆದರೆ ಈ ಮರಾಠಿ ಸಮ್ಮೇಳನದ ಹಿಂದಿರುವ ಗುಟ್ಟು ಬಹಳ ಕೀಳುಮಟ್ಟದಾಗಿದೆ.
ಇಂತಹ ನಾಡ ದ್ರೋಹದ ಕೆಲಸಕ್ಕೆ ನಮ್ಮ ಸರ್ಕಾರ ಅವಕಾಶ ಕೊಡಬಾರದು.
ನಾರಾಯಣ ಗೌಡರೇ, ಈ ನಾಡದ್ರೋಹಿಗಳಿಗೆ ಪಾಠ ಕಲಿಸುವ ಕೆಚ್ಚಿರುವುದು ನಿಮಗೆ ಮಾತ್ರ......
ನರಸತ್ತ ನಿರಭಿಮಾನಿ ರಾಜಕಾರಣಿಗಳಿಂದ ಕನ್ನಡ-ಕನ್ನಡಿಗರ ಏಳಿಗೆ ಖಂಡಿತ ಸಾಧ್ಯವಿಲ್ಲ

ನಿಮ್ಮ ಅನಿಸಿಕೆ ಬರೆಯಿರಿ

"Anonymous" ಆಗಬೇಡಿ, ಯಾವುದಾದರೂ ಒಂದು ಹೆಸರಿಟ್ಟುಕೊಂಡು ಸೋಮಾರಿತನವನ್ನು ಎದುರಿಸಿ!

Related Posts with Thumbnails